ಕ್ಯಾಟಬ್ಯಾಟಿಕ್ ಮಾರುತ

ಪರ್ವತ ಪ್ರದೇಶಗಳಲ್ಲಿ ಕಂಡುಬರುವ ವಿಶೇಷ ರೀತಿಯ ಮಾರುತ. ಪರ್ವತದ ಶಿಖರದ ಕಡೆಯಿಂದ ಕಣಿವೆಯ ಕಡೆಗೆ ಬೀಸುತ್ತದೆ. ವಿಕಿರಣದಿಂದ ಪರ್ವತದ ಶಿಖರಗಳು ತಂಪಾಗಿ ಅಲ್ಲಿಯ ಗಾಳಿಯೂ ತಂಪಾಗುತ್ತದೆ. ಗಾಳಿಯ ಸಾಂದ್ರತೆ ಹೆಚ್ಚಾಗಿ ಅದು ಕೆಳಪ್ರದೇಶಕ್ಕೆ ಹರಿಯತೊಡಗುತ್ತದೆ. ಕ್ಯಾಟಬ್ಯಾಟಿಕ್ ಮಾರುತ ಉಂಟಾಗುವುದು ಹೀಗೆ. ಈ ಮಾರುತ ಬೀಸುವುದು ಸಾಮಾನ್ಯವಾಗಿ ರಾತ್ರಿಯ ಹೊತ್ತು. ಇದು ಕಣಿವೆಯ ತಳವನ್ನು ಸೇರಿ, ನೀರ್ಗಲ್ಲ ಸರೋವರದೋಪಾದಿಯಲ್ಲಿ ಆ ಪ್ರದೇಶದಲ್ಲೆಲ್ಲ ಪದರಪದರವಾಗಿ ಹರಡಿ, ಮಂಜುಮುಸುಕಿದಂತೆ ಕಾಣುವ ಹಾಗೆ ಮಾಡುತ್ತದೆ. ಇದನ್ನು ಪರ್ವತ ಮಾರುತ (ಮೌಂಟನ್ ವಿಂಡ್) ಎಂದೂ ಕರೆಯುವುದಿದೆ. ಅನೇಕ ಪ್ರದೇಶಗಳಲ್ಲಿ ಈ ಮಾರುತಕ್ಕೆ ಸ್ಥಳೀಯ ಹೆಸರುಗಳುಂಟು. ಉತ್ತರ ಅಮೆರಿಕದ ರಾಕೀ ಪರ್ವತ ಪ್ರದೇಶಗಳಲ್ಲಿ ಚಿನೂಕ್ ಎಂದೂ ಯೂರೋಪಿನ ಆಲ್ಪ್ಸ್ ಪರ್ವತ ಪ್ರದೇಶದಲ್ಲಿ ಫೇನ್ ಎಂದೂ ಇವನ್ನು ಕರೆಯುತ್ತಾರೆ. ಕ್ಯಾಟಬ್ಯಾಟಿಕ್ ಮಾರುತ ಉಂಟಾಗುವುದು ಪರ್ವತದ ಬೆನ್ನುಪ್ರದೇಶದಲ್ಲಿ, ಅಂದರೆ ಒಂದು ದಿಕ್ಕಿನಿಂದ ಬೀಸಿದ ಗಾಳಿ ಪರ್ವತದ ಒಂದು ಪಾಶ್ರ್ವಕ್ಕೆ ಬಡಿದು ಆ ಕಡೆಯಲ್ಲೇ ಮಳೆಯನ್ನು ಕರೆದು ಮುಂದೆ ಸಾಗಿ ಪರ್ವತಶಿಖರವನ್ನೂ ದಾಟಿ ಇನ್ನೊಂದು ಪಾಶ್ರ್ವದಲ್ಲಿ ಕೆಳಕ್ಕಿಳಿಯುತ್ತದೆ. ಇದೇ ಪರ್ವತದ ಬೆನ್ನು ಪಾಶ್ರ್ವ (ಮಳೆಯ ನೆರಳಿನ ಭಾಗ). ಈ ಪಾಶ್ರ್ವದಲ್ಲಿ ಗಾಳಿ ಬೀಸುವಾಗ ಅದರಲ್ಲಿ ಆದ್ರ್ರತೆ ಇರುವುದಿಲ್ಲ. ಈ ಒಣಗಾಳಿಯೇ ಕ್ಯಾಟಬ್ಯಾಟಿಕ್ ಮಾರುತವಾಗಿ ಪರಿಣಮಿಸುತ್ತದೆ. ಚಳಿಗಾಲದಲ್ಲಿ ಈ ಮಾರುತದಿಂದ ಕಣಿವೆ ಪ್ರದೇಶದಲ್ಲಿ ವಿಪರೀತ ಮಂಜು ಮುಸುಕುತ್ತದೆ. ಹಿಮಸುರಿಯುತ್ತದೆ. ಆದರೆ ಇತರ ಕಾಲಗಳಲ್ಲಿ ಈ ಒಣಗಾಳಿಯಿಂದ ಅರಣ್ಯಗಳಲ್ಲಿ ಬೆಂಕಿ ಸಂಭವಿಸುವುದುಂಟು.

	ಕ್ಯಾಟಬ್ಯಾಟಿಕ್ ಮಾರುತ ಅಂಟಾರ್ಕ್‍ಟಿಕ ಮತ್ತು ಗ್ರೀನ್‍ಲೆಂಡ್‍ಗಳಲ್ಲಿ ಹೆಚ್ಚು. ಇತರ ಕಡೆಗಳಲ್ಲೂ ಇದು ಬೀಸುವುದಾದರೂ ಅಲ್ಲಿಯಷ್ಟು ಶೀತವಾಗಿರುವುದಿಲ್ಲ. ವಿಕಿರಣದಿಂದ ಅದರಲ್ಲಿಯ ಉಷ್ಣ ಅತಿ ವೇಗವಾಗಿ ಕಳೆದುಹೋಗುವುದರಿಂದ ಪರ್ವತ ಹಾಗೂ ನೀರ್ಗಲ್ಲ ಹಾಳೆಗಳು ಬಹಳ ಬೇಗ ತಣ್ಣಗಾಗುತ್ತವೆ. ಇದರಿಂದ ಅದರ ಮೇಲಿರುವ ಗಾಳಿ ತಣ್ಣಗಾಗಿ ಇಳಿಜಾರಿನ ಕಡೆಗೆ ಬೀಸುತ್ತದೆ.

	ಕ್ಯಾಟಬ್ಯಾಟಿಕ್ ಮಾರುತಕ್ಕೆ ಸಂವಾದಿಯಾದಂಥದು ಆನಬ್ಯಾಟಿಕ್ ಮಾರುತ. ಇದು ಹಗಲು ಹೊತ್ತಿನಲ್ಲಿ ಉತ್ಪತ್ತಿಯಾಗುತ್ತದೆ. ಆಗ ಪರ್ವತಕಣಿವೆಗಳ ಇಳಿಜಾರುಗಳಲ್ಲಿ ಗಾಳಿ ಕಾದು ಬೆಚ್ಚಗಾಗುತ್ತದೆ. ಇದರಿಂದಾಗಿ ಮೇಲ್ಪದರಗಳ ಗಾಳಿಯೂ ಬೆಚ್ಚಗಾಗುತ್ತದೆ. ಈ ಗಾಳಿ ಹಗುರವಾಗಿ ಪರ್ವತಗಳ ಮೇಲ್ಭಾಗವನ್ನು ತಲಪಿ, ಅಲ್ಲಿರುವ ತಣ್ಣಗಿನ ಗಾಳಿಯನ್ನು ದೂರ ತಳ್ಳುತ್ತದೆ. ಈ ಕ್ರಿಯೆಯಿಂದ ಆನಬ್ಯಾಟಿಕ್ ಅಥವಾ ಕಣಿವೆ ಮಾರುತ ಉಂಟಾಗುತ್ತದೆ. (ಕೆ.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ